ವಿಜಯದಾಸ
	ಸು. 1683-1755. ಕನ್ನಡದ ಪ್ರಮುಖ ಹರಿದಾಸರಲ್ಲಿ ಒಬ್ಬರು. ಮಾನ್ವಿ ತಾಲ್ಲೂಕಿನ ಚೀಕಲಪರಿವಿ ಇವರ ಜನ್ಮಸ್ಥಳ. ತಂದೆ ಶ್ರೀನಿವಾಸಪ್ಪ, ತಾಯಿ ಕೂಸಮ್ಮ. ಇವರ ಪೂರ್ವಾಶ್ರಮದ ಹೆಸರು ದಾಸಪ್ಪ. ಕಡುಬಡತನದಲ್ಲಿ ಬೆಳೆದ ಇವರಿಗೆ ಪುರಂದರದಾಸರಿಂದ ಸ್ವಪ್ನದಲ್ಲಿ ಅಂಕಿತ ಪ್ರದಾನವಾಗಿ ವಿಜಯದಾಸರಾದರೆಂದು ತಿಳಿಯುತ್ತದೆ. ವಿಜಯವಿಠಲ ಎಂಬುದು ಇವರ ಅಂಕಿತ. ಕಾಲ, ಸಾಧನೆ, ಸಿದ್ಧಿಗಳ ದೃಷ್ಟಿಯಿಂದ ಇವರನ್ನು ಹರಿದಾಸ ಸಾಹಿತ್ಯದ ದ್ವಿತೀಯ ಘಟ್ಟದ ಪ್ರಮುಖರೆನ್ನಬಹುದು. ಪುರಂದರ, ಕನಕಾದಿ ದಾಸರುಗಳಿಂದ ಕಾವ್ಯಮಯವಾಗಿ ಹೊಮ್ಮಿದ ದಾಸಸಾಹಿತ್ಯ ಇವರ ಕೈಯಲ್ಲಿ ಶಾಸ್ತ್ರಜ್ಞಾನ ಹಾಗೂ ಪಾಂಡಿತ್ಯದ ಕುರುಹಾಯಿತು. ಹರಿನಾಮಮಹಿಮೆ, ಬಿಂಬರೂಪಿ ಭಗವಂತನನ್ನು ಒಲಿಸಿಕೊಳ್ಳುವ ಬಗೆ, ಜ್ಞಾನಭಕ್ತಿ ವೈರಾಗ್ಯಗಳ ಸಂಪಾದನೆ, ಹರಿಸರ್ವೋತ್ತಮತ್ವ, ಹರಿಯ ಸರ್ವವ್ಯಾಪಕತ್ವ, ದೇವತಾ ತರತಮ, ಗುರುಕರುಣೆಯ, ಭಗವತ್ಪ್ರಸಾದದ ಆವಶ್ಯಕತೆ-ಈ ಎಲ್ಲ ಮಾಧ್ಯಮವಾಗಿ ನಿಂತ ಇವರ ಕೃತಿಗಳಲ್ಲಿ ಲಾಲಿತ್ಯದ ಅಂಶ ಕಡಿಮೆ. ಇತರ ದಾಸರಲ್ಲಿ ಕಂಡುಬರುವಷ್ಟು ವೈವಿಧ್ಯವೂ ಇಲ್ಲ. ಇವರಲ್ಲಿ ಗಹನವಾದ ವಸ್ತುವಿಗೆ ಅನುಗುಣವಾಗಿ ಸುಳಾದಿಗಳ ರಚನೆ ಹೆಚ್ಚು. ಕೀರ್ತನೆಗಳ ವಸ್ತು ಬಂಧಗಳು ಬಿಗಿಯಾಗಿದ್ದರೂ ಭಾಷೆ ಹಾಗೂ ನಿರೂಪಣೆಗಳು ಸರಳವಾಗಿವೆ. ಎಲ್ಲರೊಳು ವ್ಯಾಪಕನಾಗಿಪ್ಪನೆ ಬಲ್ಲಿದ ದೊರೆಯೇ ಜ್ಞಾನಿಗಳರಸನೆ ಎಲ್ಲಿ ನೋಡಲು ಸರಿಗಾಣೆ ವಿಜಯವಿಠಲ ಬಾ, ಅಪ್ರತಿಮಲ್ಲ ಬಾ, ಭಕುತವತ್ಸಲ ಬಾ, ಹಸೆಯ ಜಗುಲಿಗೆ - ಇದು ಶೋಭಾನೆಯ ಪದವೊಂದರಲ್ಲಿ ಪರಮಾತ್ಮನನ್ನು ಹಸೆಮಣೆಗೆ ಕರೆದಿರುವ, ಆ ಮೂಲಕ ಹರಿಯ ಸರ್ವಶಕ್ತ ಹಾಗೂ ಸರ್ವವ್ಯಾಪಕ-ಎಂಬ ತತ್ತ್ವ ಪ್ರತಿಪಾದನೆ ಮಾಡುವ ರೀತಿ. ಈ ರೀತಿಯ  ತಾತ್ತ್ವಿಕತೆಯೊಂದಿಗೆ ಮನಸ್ಸಿನ ಚಂಚಲತೆ, ಮನೋನಿಗ್ರಹದ ಕಷ್ಟಸಾಧ್ಯತೆ, ಮನುಷ್ಯನ ಜೀವನದಲ್ಲಿ ಋಣದ ಪಾತ್ರ, ಹಬ್ಬಗಳ ಆಚರಣೆ ಇತ್ಯಾದಿಗಳನ್ನೂ ಇವರು ವಿಚಾರಮಾಡಿದ್ದಾರೆ. ವಸುಧೆಯೊಳಗೆ ಒಂದು ಕಾಸು ಕೊಟ್ಟವನ ಋಣ ವಸುಧೆಯೆಲ್ಲಾ ತಿರುಗೆ ಪೋಗದಯ್ಯ ಎಂಬ ಮಾತು, ದಂಪತಿಗಳು ಏಕವಾಗಿಪ್ಪುದೇ ಹಬ್ಬ ಎಂಬ ವ್ಯಾಖ್ಯಾನ ಇವರ ಅನುಭವ, ತಿಳಿವಳಿಕೆ ಹಾಗೂ ವಿಶಾಲದೃಷ್ಟಿಗಳ ದ್ಯೋತಕ ವಾಗಿದೆ. ಅಂತೆಯೇ ಆತ್ಮಯಜ್ಞಸುಳಾದಿ, ಹರಿಸ್ವತಂತ್ರಸುಳಾದಿ, ಅಭಯಸುಳಾದಿ, ಕಂಕಣ ಸುಳಾದಿಗಳಲ್ಲಿಯ ಇವರ ಶಾಸ್ತ್ರಜ್ಞಾನ ಮೆಚ್ಚುವಂಥದು.

	ಪುರಂದರದಾಸರ ಜೀವನ ಪರಿಚಯಕ್ಕೆ ವಿಜಯದಾಸರ ಉಪಲಬ್ಧ ವಿರುವ ಕೀರ್ತನೆಗಳೆ ಪ್ರಾಚೀನ ಪ್ರಮಾಣಗಳು. ಜೊತೆಗೆ ಶ್ರೀಪಾದರಾಜ, ಟೀಕಾಚಾರ್ಯ, ವ್ಯಾಸರಾಯ-ಇವರುಗಳ ಬಗ್ಗೆಯೂ ಸಾಕಷ್ಟು ವಿಷಯ ಸಂಗ್ರಹಣೆಮಾಡಿಕೊಟ್ಟಿದ್ದಾರೆ. ಮತಸಾಹಿತ್ಯವಾಗಿ ಇವರ ಕೃತಿಗಳು ವಿಶೇಷ ಮೌಲ್ಯವನ್ನೊಳಗೊಂಡಿವೆಯೆನ್ನಬಹುದು.

	ಸುಮಾರು ಎಪ್ಪತ್ತಮೂರು ವರ್ಷಗಳ ತುಂಬು ಜೀವನವನ್ನು ಬಾಳಿ, ಗುಂತಕಲ್ಲಿನ ಬಳಿಯಿರುವ ಚಿಪ್ಪಗಿರಿ ಎಂಬ ಸ್ಥಳದಲ್ಲಿ ನಿಧನರಾದರು. ಇವರು ಭೃಗುಮುನಿಗಳ ಅವತಾರವೆಂಬ ಒಂದು ನಂಬಿಕೆಯೂ ಪುರಂದರದಾಸರ ನಾಲ್ಕನೆಯ ಮಗ ಮಧ್ವಪತಿಯೆ ವಿಜಯದಾಸರಾಗಿ ಹುಟ್ಟಿದರೆಂಬ ಪ್ರತೀತಿಯೂ ಇದೆ. ಇವರ ಶಿಷ್ಯ ಮೋಹನದಾಸರು ಮುಂದೆ ಪ್ರಸಿದ್ಧ ಹರಿದಾಸರಾದರು.   
(ಟಿ.ಎನ್.ಎನ್.)
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ